Tuesday, 5 September 2017

ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ: ಹಿರಿಯ ಐಪಿಎಸ್ ಅಧಿಕಾರಿಗಳು ಹಾಗೂ ಪ್ರಭಾವಿ ರಾಜಕಾರಣಿಯೊಬ್ಬರು ತಮಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಕಳೆದ ವರ್ಷ ಆತ್ಮಹತ್ಯೆಗೆ ಶರಣಾಗಿದ್ದ ಮಂಗಳೂರು ಐಜಿಪಿ ಕಚೇರಿಯ ಡಿವೈಎಸ್ಪಿ ಎಂಕೆ ಗಣಪತಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ಆದೇಶ ಹೊರಡಿಸಿದೆ.
ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಕೋರಿ ಗಣಪತಿ ಅವರ ತಂದೆ ಎಂ.ಕೆ. ಕುಶಾಲಪ್ಪ ಹಾಗೂ ಸಹೋದರ ಮಾಚಯ್ಯ ಅವರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯಲ್ ಹಾಗೂ ನ್ಯಾಯಮೂರ್ತಿ ಉದಯ್ ಲಲಿತ್ ಅವರನ್ನೊಳಗೊಂಡ ಪೀಠ ಸಿಬಿಐ ತನಿಖೆಗೆ ಆದೇಶಿಸಿದೆ.
ಡಿವೈಎಸ್ಪಿ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಎ.ಎಂ ಪ್ರಸಾದ್ ಹಾಗೂ ಪ್ರಣಬ್ ಮೊಹಂತಿ ಅವರ ವಿಚಾರಣೆ ನಡೆಸಿ ಮೂರು ತಿಂಗಳಿನೊಳಗೆ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸಿಬಿಐಗೆ ಸೂಚಿಸಿದೆ.

ಈ ಹಿಂದೆ ಸಿಬಿಐ ತನಿಖೆಗೆ ಒಪ್ಪಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿತ್ತು. ಹೀಗಾಗಿ ಎಂ.ಕೆ. ಕುಶಾಲಪ್ಪ ಅವರು ಸಿಬಿಐ ತನಿಖೆ ಕೋರಿ ಸುಪ್ರೀಂ ಮೆಟ್ಟಿಲೇರಿದ್ದರು. ವಿಡಿಯೋ ಸಾಕ್ಷ್ಯವಿದ್ದರೂ ಯಾವುದೇ ಕ್ರಮ ಜರುಗಿಸುವಲ್ಲಿ ಕರ್ನಾಟಕ ಸರ್ಕಾರ, ತನಿಖಾ ತಂಡ ವಿಫಲವಾಗಿದೆ, ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕುಶಾಲಪ್ಪ ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್ ಪುರಷ್ಕರಿಸಿದೆ.
ಎಂ.ಕೆ.ಗಣಪತಿ ಅವರು ಕಳೆದ ವರ್ಷ ಜುಲೈ 7ರಂದು ಮಡಿಕೇರಿ ವಿನಾಯಕ ಲಾಡ್ಜ್ ನಲ್ಲಿ ನೇಣಿಗೆ ಶರಣಾಗಿದ್ದರು. ನೇಣಿಗೆ ಶರಣಾಗುವ ಮುನ್ನ ನನ್ನ ಸಾವಿಗೆ ಹಿಂದಿನ ಗೃಹಸಚಿವ ಕೆ.ಜೆ. ಜಾರ್ಜ್, ಐಜಿಪಿ ಪ್ರಣವ್ ಮೊಹಂತಿ, ಎಡಿಜಿಪಿ ಎಎಂ ಪ್ರಸಾದ್ ಕಾರಣ ಎಂದು ಆರೋಪಿಸಿದ್ದರು.
ಸಾವಿಗೂ ಮುನ್ನ ಗಣಪತಿ ಅವರು ನೀಡಿದ್ದ ಹೇಳಿಕೆ ರಾಜಕೀಯ ವಲಯ ಹಾಗೂ ಪೊಲೀಸ್ ಇಲಾಖೆಯಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿತ್ತು. ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಅಲ್ಲದೆ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ಜಾರ್ಜ್ ಅವರಿಂದ ರಾಜಿನಾಮೆಯನ್ನು ಪಡೆದಿತ್ತು. ಪ್ರಕರಣದ ತನಿಖೆ ನಡೆಸಿದ ಸಿಐಡಿ ಈ ಮೂವರು ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿ, ಬಿ ರಿಪೋರ್ಟ್ ಸಲ್ಲಿಸಿದೆ.

No comments:

Post a Comment