Monday 11 September 2017

ಗೌರಿ ಲಂಕೇಶ್ : ಐದನೇ ದಿನ ವೀರಶೈವ ಸಂಪ್ರದಾಯದಂತೆ ಪೂಜೆ


ಬೆಂಗಳೂರು: ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಅವರ ಅಂತ್ಯಸಂಸ್ಕಾರದಲ್ಲಿ ಯಾವುದೇ ವಿಧಿವಿಧಾನಗಳನ್ನು ಅನುಸರಿಸದೇ ಮಣ್ಣು ಮಾಡಲಾಗಿತ್ತು. ಆದರೆ ಗೌರಿ ಲಂಕೇಶ್ ಅವರು ಮೃತಪಟ್ಟು ಐದನೇ ದಿನದದಂದು ಸಂಪ್ರದಾಯಿಕ ಪೂಜೆ ನಡೆದಿದೆ.
ಭಾನುವಾರ ಸಂಜೆ ಐದನೇ ದಿನವಾದ ತಿಥಿಯಂದು ಗೌರಿಲಂಕೇಶ್ ಸಮಾಧಿಗೆ ವೀರಶೈವ ಸಂಪ್ರದಾಯದಂತೆ ಪೂಜೆ ನಡೆದಿದೆ. ಬಾಳೆ ಕಂಬ ಕಟ್ಟಿ ಹೊಂಬಾಳೆಯನ್ನು ಇಟ್ಟು ಕುಟುಂಬದ ಸದಸ್ಯರು ಪೂಜಿಸಿದ್ದಾರೆ.
ಗೌರಿ ಲಂಕೇಶ್ ಸಮಾಧಿಗೆ ಎಡೆಯಿಟ್ಟು ಸಂಪ್ರದಾಯಿಕವಾಗಿ ನಡೆದ ಪೂಜೆಯಲ್ಲಿ ಸಹೋದರ ಇಂದ್ರಜಿತ್ ಲಂಕೇಶ್ ಹಾಗೂ ಕುಟುಂಬಸ್ಥರು ಭಾಗಿಯಾಗಿದ್ದರು ಎಂದು ಈ ಕಾರ್ಯಕ್ರಮವನ್ನು ವೀಕ್ಷಿಸಿದ ಪ್ರತ್ಯಕ್ಷದರ್ಶಿಗಳು ಟಿವಿಗೆ ತಿಳಿಸಿದ್ದಾರೆ.
ಗೌರಿ ಲಂಕೇಶ್ ಧಾರ್ಮಿಕ ವಿಧಿವಿಧಾನಗಳ ನಂಬದೇ ಇದ್ದ ಕಾರಣ ಅಂತ್ಯಸಂಸ್ಕಾರದ ವೇಳೆ ವೀರಶೈವ ಸಂಪ್ರದಾಯವನ್ನು ಅನುಸರಿಸದೇ ಪಾರ್ಥಿವ ಶರೀರವನ್ನು ಚಾಮರಾಜಪೇಟೆಯಲ್ಲಿರುವ ರುದ್ರಭೂಮಿ ಟಿಬಿ ಮಿಲ್ ನಲ್ಲಿ ಬುಧವಾರ ಸಂಜೆ ಮಣ್ಣು ಮಾಡಲಾಗಿತ್ತು.
ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಹಿಂದೆ ನಕ್ಸಲರ ಕೈವಾಡವಿರುವ ಶಂಕೆ  ವ್ಯಕ್ತವಾಗಿದೆ.

ಗೌರಿ ಲಂಕೇಶ್ ಅವರು ರಾಜ್ಯ ನಕ್ಸಲರ ಶರಣಾಗತಿ ಸಮಿತಿಯ ಸದಸ್ಯೆಯಾಗಿದ್ದರು. ನಕ್ಸಲರನ್ನು ಮುಖ್ಯ ವಾಹಿನಿಗೆ ತರಲು ಪ್ರಯತ್ನ ಮಾಡುತ್ತಿದ್ದರು. ಹೀಗಾಗಿ ನಕ್ಸಲರಿಂದ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಕಳೆದ 2 ವರ್ಷಗಳಿಂದ ನಕ್ಸಲರು ಹಗೆ ಇಟ್ಟುಕೊಂಡಿದ್ರು ಎಂಬ ಮಾಹಿತಿ ಇದೆ. ನಕ್ಸಲರ ಒಂದು ತಂಡ ಗೌರಿ ಲಂಕೇಶ್ ಮೇಲೆ ದ್ವೇಷ ಸಾಧಿಸುತ್ತಿತ್ತು ಎಂದು ಹೇಳಲಾಗಿದೆ. ಹೀಗಾಗಿ ನಕ್ಸಲರೇ ಗೌರಿ ಲಂಕೇಶ್‍ರನ್ನು ಟಾರ್ಗೆಟ್ ಮಾಡಿದ್ರಾ ಎಂಬ ಶಂಕೆ ವ್ಯಕ್ತವಾಗಿದೆ.
ಕಳೆದ ಒಂದೂವರೆ ದಶಕದಿಂದ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಕಳಸ ಮೂಲದ ಕನ್ಯಾಕುಮಾರಿ ಹಾಗೂ ರಾಯಚೂರು ಮೂಲದ ಶಿವು ಮತ್ತು ಚಿನ್ನಮ್ಮ ಮೂರು ತಿಂಗಳ ಹಿಂದೆ ಶರಣಾಗಿ ಮುಖ್ಯವಾಹಿನಿಗೆ ಬರುವುದಾಗಿ ತಿಳಿಸಿದ್ದರು. ಹಿರಿಯ ವಕೀಲ ಎ.ಕೆ ಸುಬ್ಬಯ್ಯ, ಪತ್ರಕರ್ತೆ ಗೌರಿ ಲಂಕೇಶ್ ಸೇರಿದಂತೆ ಅಧಿಕಾರಿಗಳ ನೇತೃತ್ವದಲ್ಲಿ ಸರ್ಕಾರ ರಚಿಸಿರೋ ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ವೇದಿಕೆ ಮೂಲಕ ಈ ಮೂವರು ನಕ್ಸಲರು ಶರಣಾಗಿದ್ದರು.

ಕೃಪೆ. ಪಬ್ಲಿಕ್ ಟಿವಿ
ಲಿಂಗಾಯತ ಧರ್ಮ : ಪಾಟೀಲ್ ಹೇಳಿಕೆಗೆ ಶ್ರೀಮಠದಲ್ಲೇ ಆಕ್ರೋಶ

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ತುಮಕೂರಿನ ಸಿದ್ದಗಂಗಾ ಶ್ರೀಗಳು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ನೀಡಿರುವ ಹೇಳಿಕೆಗೆ ಶ್ರೀಮಠದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

 ನಿನ್ನೆ ತುಮಕೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಶ್ರೀಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ವೀರಶೈವ ಲಿಂಗಾಯತ ವಿಷಯದ ಬಗ್ಗೆ ಪ್ರಸ್ತಾಪಿಸಿ ನಂತರ ಬೆಂಗಳೂರಿಗೆ ಬಂದು ಲಿಂಗಾಯತ ಧರ್ಮಕ್ಕೆ ತುಮಕೂರು ಶ್ರೀಗಳು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಏಕಪಕ್ಷೀಯವಾಗಿ ನೀಡಿರುವ ಹೇಳಿಕೆಯನ್ನು ಮಠದ ಮೂಲಗಳು ತೀವ್ರವಾಗಿ ಖಂಡಿಸಿವೆ.  

ನಮ್ಮ ಮಠ ಶೈಕ್ಷಣಿಕ, ಧಾರ್ಮಿಕ ಸೇವೆ ಮಾಡುತ್ತಾ ಬಂದಿದೆ. ಮಠವನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಬೇಡ ಎಂದು ಇಂದು ಮಠಕ್ಕೆ ಭೇಟಿ ನೀಡಿದ ಸುದ್ದಿಗಾರರೊಂದಿಗೆ ಸ್ಪಷ್ಟನೆ ನೀಡಿದ್ದಾರೆ.

Wednesday 6 September 2017

ಮಂಗಳೂರು ಚಲೋ... ಬಂದನಕ್ಕೊಳಗಾದ ಬಾಳೆಹೊನ್ನೂರು ಖಾಂಡ್ಯ ಕಾರ್ಯಕರ್ತರು..


ಕೆ.ಎಪ್.ಡಿ. ಮತ್ತು ಪಿ.ಎಪ್.ಐ ಸಂಘಟನೆಗಳನ್ನು ನಿಷೇದಿಸುವಂತೆ ಮತ್ತು ಸರಣಿ ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಬಾಳೆಹೊನ್ನೂರು ಮತ್ತು ಖಾಂಡ್ಯ ಹೋಬಳಿ ಮತ್ತು ಯುವಮೋರ್ಚಾದಿಂದ ಹಮ್ಮಿಕೊಂಡಿದ್ದ ಮಂಗಳೂರು ಚಲೋ ಬೈಕ್ ಜಾಥವನ್ನು ಎಸ್ ಪೇಟೆ ಸಮುದಾಯ ಭವನದ ಬಳಿ ಪೋಲಿಸರು ತಡೆದು  ಪ್ರತಿಭಟನಾ ಕಾರರನ್ನು ಬಂದಿಸಿದರು.  ಬೃಹತ್ ಸಂಖ್ಯೆಯಲ್ಲಿ ಆಗಮಿಸಿದ್ದ ಬೈಕ್ ಜಾಥವನ್ನು ಬಾಳೆಹೊನ್ನೂರು ಬಿಜೆಪಿ ಮುಖಂಡ ಕಲ್ಮಕ್ಕಿ ಉಮೇಶ್ ಬಾಳೆಹೊನ್ನೂರಿನಲ್ಲಿ ಚಾಲನೆ ನೀಡಿದರು . ಬಂದನಕ್ಕೊಳಗಾದ  ನಂತರ ಮಾತನಾಡಿದ ತಾಲ್ಲೂಕ್ ಬಿಜೆಪಿ ಅಧ್ಯಕ್ಷ ವೆನಿಲ್ಲಾ ಭಾಸ್ಕರ್ ಪರಮ ನೀಚ ಸರ್ಕಾರ ಈ ಕಾಂಗ್ರೇಸ್ ಸರ್ಕಾರವಾಗಿದೆ. ಹಿಂದೂಪರ ಕಾರ್ಯಕರ್ತರ ಸರಣಿ ಹತ್ಯೆಯನ್ನು ನಾವು ವಿರೋದಿಸುತ್ತೇವೆ. ಈ ರಾಜ್ಯ ಸರ್ಕಾರಕ್ಕೆ ನೈತಿಕತೆ ಬದ್ದತೆ ಇದ್ದರೇ ಕೂಡಲೇ ಪಿ.ಎಪ್.ಐ ಮತ್ತು ಕೆ.ಎಪ್ ಡಿ. ಸಂಘಟನೆಗಳನ್ನು ನಿಷೇದಿಸಬೇಕೆಂದು ಒತ್ತಾಯಿಸಿದರು.
ಕಲ್ಮಕ್ಕಿ ಉಮೇಶ್ ಮಾತನಾಡಿ ಹಿಂದುಗಳು ಸಹಿಷ್ಣುಗಳು  ಹಾಗಂತ ಸರಣಿಯಾಗಿ ಹಿಂದುಗಳ  ಹತ್ಯೆಯಾಗುತ್ತಿದ್ದರೆ ಅದನ್ನು ಎಂದಿಗೂ ಹಿಂದೂ ಸಮಾಜ ಸಹಿಸುವುದಿಲ್ಲ. ಮುಸ್ಲಿಂ ಮೂಲಭೂತ ಸಂಘಟನೆಗಳು ಸಮಾಜಕ್ಕೆ ಮಾರಕವಾದಂತಹವು ಕೂಡಲೇ ಈ ಸಂಘಟನೆಗಳನ್ನು ರಾಜ್ಯ ಸರ್ಕಾರ ನಿಷೇದಿಸಬೇಕೆಂದು ನುಡಿದರು.  ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತಾ ಲಿಂಗರಾಜು ಮಾತನಾಡಿ  ಹಿಂದು ಸ್ಥಾನದಲ್ಲಿ ಹಿಂದುವಿಗೆ ಬೆಲೆ ಇಲ್ಲದಂತಾಗಿದೆ. ಈ ರಾಜ್ಯ ಸರ್ಕಾರ ಅಲ್ಪ ಸಂಖ್ಯಾತರ ತುಷ್ಟೀಕರಣದಲ್ಲಿ ತೊಡಗಿದ್ದು ಮುಂದಿನ ದಿನಗಳಲ್ಲಿ ಇದೇ ಸರ್ಕಾರಕ್ಕೆ ಮಾರಕವಾಗುವುದರಲ್ಲಿ ಅನುಮಾನವಿಲ್ಲ ಎಂದು ನುಡಿದರು.  ಬಿಜೆಪಿ ಮುಖಂಡ ಕೆ.ಟಿ.ವೆಂಕಟೇಶ್ ಮಾತನಾಡಿ ಈ ರಾಜ್ಯ ಸರ್ಕಾರಕ್ಕೆ ಕೊನೆಗಾಲ ಸಮೀಪಿಸುತ್ತಿದ್ದು ಮುಂದಿನ ಸರ್ಕಾರ ಬಿಜೆಪಿಯದ್ದೇ ಎಂದು ನುಡಿದರು.  ಸಭೆಯಲ್ಲಿ ಹೋಬಳಿ ಅಧ್ಯಕ್ಷ ಕೆ.ಕೆ ವೆಂಕಟೇಶ್ ಬಿಜೆಪಿ ಮುಖಂಡ ಪ್ರಭಾಕರ್ ಪ್ರಣಸ್ವಿ. ವಕ್ತಾರ ಜಗದೀಶ್ಚಂದ್ರ. ಖಾಂಡ್ಯ ಹೋಬಳಿ ಅಧ್ಯಕ್ಷ ರವಿ. ಯುವಮೋರ್ಚಾ ಅಧ್ಯಕ್ಷ ರಚನ್ ಹುಯಿಗೆರೆ. ತಾಲ್ಲೂಕ್ ಪಂಚಾಯಿತಿ ಉಪಾಧ್ಯಕ್ಷ ಮಂಜು ಹೊಳೆಬಾಗಿಲು.  ಖಾಂಡ್ಯ ಹೋಬಳಿಯ ಚಂದ್ರು.  ನಿತ್ಯಾನಂದ. ಪಾರ್ವತಮ್ಮ  ಮುಖಂಡರುಗಳು ಉಪಸ್ಥಿತರಿದ್ದರು.

Tuesday 5 September 2017

ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ: ಹಿರಿಯ ಐಪಿಎಸ್ ಅಧಿಕಾರಿಗಳು ಹಾಗೂ ಪ್ರಭಾವಿ ರಾಜಕಾರಣಿಯೊಬ್ಬರು ತಮಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಕಳೆದ ವರ್ಷ ಆತ್ಮಹತ್ಯೆಗೆ ಶರಣಾಗಿದ್ದ ಮಂಗಳೂರು ಐಜಿಪಿ ಕಚೇರಿಯ ಡಿವೈಎಸ್ಪಿ ಎಂಕೆ ಗಣಪತಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ಆದೇಶ ಹೊರಡಿಸಿದೆ.
ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಕೋರಿ ಗಣಪತಿ ಅವರ ತಂದೆ ಎಂ.ಕೆ. ಕುಶಾಲಪ್ಪ ಹಾಗೂ ಸಹೋದರ ಮಾಚಯ್ಯ ಅವರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯಲ್ ಹಾಗೂ ನ್ಯಾಯಮೂರ್ತಿ ಉದಯ್ ಲಲಿತ್ ಅವರನ್ನೊಳಗೊಂಡ ಪೀಠ ಸಿಬಿಐ ತನಿಖೆಗೆ ಆದೇಶಿಸಿದೆ.
ಡಿವೈಎಸ್ಪಿ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಎ.ಎಂ ಪ್ರಸಾದ್ ಹಾಗೂ ಪ್ರಣಬ್ ಮೊಹಂತಿ ಅವರ ವಿಚಾರಣೆ ನಡೆಸಿ ಮೂರು ತಿಂಗಳಿನೊಳಗೆ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸಿಬಿಐಗೆ ಸೂಚಿಸಿದೆ.

ಈ ಹಿಂದೆ ಸಿಬಿಐ ತನಿಖೆಗೆ ಒಪ್ಪಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿತ್ತು. ಹೀಗಾಗಿ ಎಂ.ಕೆ. ಕುಶಾಲಪ್ಪ ಅವರು ಸಿಬಿಐ ತನಿಖೆ ಕೋರಿ ಸುಪ್ರೀಂ ಮೆಟ್ಟಿಲೇರಿದ್ದರು. ವಿಡಿಯೋ ಸಾಕ್ಷ್ಯವಿದ್ದರೂ ಯಾವುದೇ ಕ್ರಮ ಜರುಗಿಸುವಲ್ಲಿ ಕರ್ನಾಟಕ ಸರ್ಕಾರ, ತನಿಖಾ ತಂಡ ವಿಫಲವಾಗಿದೆ, ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕುಶಾಲಪ್ಪ ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್ ಪುರಷ್ಕರಿಸಿದೆ.
ಎಂ.ಕೆ.ಗಣಪತಿ ಅವರು ಕಳೆದ ವರ್ಷ ಜುಲೈ 7ರಂದು ಮಡಿಕೇರಿ ವಿನಾಯಕ ಲಾಡ್ಜ್ ನಲ್ಲಿ ನೇಣಿಗೆ ಶರಣಾಗಿದ್ದರು. ನೇಣಿಗೆ ಶರಣಾಗುವ ಮುನ್ನ ನನ್ನ ಸಾವಿಗೆ ಹಿಂದಿನ ಗೃಹಸಚಿವ ಕೆ.ಜೆ. ಜಾರ್ಜ್, ಐಜಿಪಿ ಪ್ರಣವ್ ಮೊಹಂತಿ, ಎಡಿಜಿಪಿ ಎಎಂ ಪ್ರಸಾದ್ ಕಾರಣ ಎಂದು ಆರೋಪಿಸಿದ್ದರು.
ಸಾವಿಗೂ ಮುನ್ನ ಗಣಪತಿ ಅವರು ನೀಡಿದ್ದ ಹೇಳಿಕೆ ರಾಜಕೀಯ ವಲಯ ಹಾಗೂ ಪೊಲೀಸ್ ಇಲಾಖೆಯಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿತ್ತು. ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಅಲ್ಲದೆ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ಜಾರ್ಜ್ ಅವರಿಂದ ರಾಜಿನಾಮೆಯನ್ನು ಪಡೆದಿತ್ತು. ಪ್ರಕರಣದ ತನಿಖೆ ನಡೆಸಿದ ಸಿಐಡಿ ಈ ಮೂವರು ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿ, ಬಿ ರಿಪೋರ್ಟ್ ಸಲ್ಲಿಸಿದೆ.