Friday, 26 May 2017

ಗೋಹತ್ಯೆ  ನಿಷೇಧ


ರೈತರಿಗೆ ಮಾತ್ರ ದನಕರು ಮಾರಾಟಕ್ಕೆ ಅನುಮತಿ
ನವದೆಹಲಿ :  ದೇಶಾದ್ಯಂತ ಗೋವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವುದಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ.

ಪ್ರಾಣಿಗಳ ವ್ಯಾಪಾರಕ್ಕೆ ಹೊರಡಿಸಿರುವ ಹೊಸ ಆದೇಶದನ್ವಯ ಗೋವುಗಳನ್ನು ಭೂಮಾಲೀಕರಿಗೆ ಮಾತ್ರ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಪ್ರಾಣಿಗಳ ಕಲ್ಯಾಣ ಹೆಸರಿನಲ್ಲಿ ನಿನ್ನೆ ಹೊರಡಿಸಲಾದ ಅಧಿಸೂಚನೆ ಗೋವುಗಳ ರಕ್ಷಣೆಗೆ ಹೊರಡಿಸಲಾದ ಕೇಂದ್ರ ಸರ್ಕಾರದ ಮೊದಲ ಆದೇಶವಾಗಿದೆ.

ಗೋವುಗಳ ವ್ಯಾಪಾರಸ್ಥರು ವಿಶೇಷವಾಗಿ ಮುಸ್ಲಿಂರ ಮೇಲೆ ಹಿಂದೂ ಸಂಘಟನೆಗಳಿಂದ ಹಿಂಸಾಚಾರ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಆದೇಶವನ್ನು ಹೊರಡಿಸಲಾಗಿದೆ.

ಹರಿಯಾಣ ಮೂಲದ ಹಾಲು ಉತ್ಪಾದಕ ಪೆಹ್ಲೂಖಾನ್ ಅವರ ಮೇಲೆ ಗೋ ರಕ್ಷಕರ ಪಡೆ ಏಪ್ರಿಲ್ 1 ರಂದು ರಾಜಸ್ತಾನದಲ್ಲಿ ಹಲ್ಲೆ ನಡೆಸಿದ ನಂತರ 4 ದಿನಗಳಲ್ಲಿ ಅವರು ಗುಣಮುಖರಾಗದೆ ಸಾವನ್ನಪ್ಪಿದ್ದರು.

ಕಳೆದ ಒಂದು ತಿಂಗಳ ಹಿಂದೆ ಅಸ್ಸಾಂನಲ್ಲಿ ಇಬ್ಬರು ಗೋ ವ್ಯಾಪಾರಸ್ಥರು ಕಸಾಯಿಖಾನೆಗೆ ಗೋವುಗಳನ್ನು ಸಾಗಿಸುತ್ತಿದ್ದಾರೆ ಎಂಬ ಸಂಶಯದ ಮೇಲೆ ಅವರಿಗೆ ಹಿಂಸೆ ನೀಡಲಾಗಿತ್ತು. ಈಶಾನ್ಯ ಭಾರತದ ಬಹುತೇಕ ಭಾಗಗಳು ಮತ್ತು ಕೇರಳ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಗೋಹತ್ಯೆಯನ್ನು ನಿಷೇಧಿಸಲಾಗಿದೆ.

ಗೋವುಗಳನ್ನು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಮಾತ್ರ ಬಳಸಿಕೊಳ್ಳಬೇಕು, ಕಸಾಯಿಖಾನೆಗೆ ಮಾರಾಟ ಮಾಡುವುದಕ್ಕಲ್ಲ ಎಂದು 1960ರ ಪ್ರಾಣಿಗಳ ಹಿಂಸಾಚಾರ ತಡೆ ಕಾಯ್ದೆಯ ವಿಶೇಷ ವಿಧಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಜಾನುವಾರುಗಳನ್ನು ಗಮನದಲ್ಲಿಟ್ಟುಕೊಂಡು ಈ ಷರತ್ತನ್ನು ವಿಧಿಸಲಾಗಿತ್ತು.

ತಾನು ಕೃಷಿಕ ಎಂಬುದನ್ನು ಸಾಬೀತುಪಡಿಸುವ ವ್ಯಕ್ತಿಗಳಿಗೆ ಮಾತ್ರ ಜಾನುವಾರುಗಳನ್ನು ಮಾರಾಟ ಮಾಡಬಹುದಾಗಿದೆ.

8 ಪುಟಗಳನ್ನೊಳಗೊಂಡ ನಿಷೇಧ ಆದೇಶದನ್ವಯ ಅಂತರ್ರಾಷ್ಟ್ರೀಯ ಗ‌ಡಿಯಲ್ಲಿ 50 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ದನಗಳ ಸಂತೆಗಳಿರಬಾರದು, ರಾಜ್ಯದ ಗಡಿಯ 25 ಕಿ.ಮೀ ವ್ಯಾಪ್ತಿಯಲ್ಲಿ ಇಂತಹ ಸಂತೆಗಳಿಗೆ ಅವಕಾಶ ನೀಡದಿರಲು ಪರಿಸರ ಸಚಿವಾಲಯ ಕ್ರಮ ಕೈಗೊಂಡಿದೆ. ಯಾವುದೇ ರಾಜ್ಯದಿಂದ ಹೊರಗೆ ಜಾನುವಾರುಗಳನ್ನು ಸಾಗಿಸಬೇಕಾದರೆ ಸರ್ಕಾರದಿಂದ ವಿಶೇಷ ಅನುಮತಿ ಪಡೆಯಬೇಕಾಗಿದೆ.

ಮ್ಯಾಜಿಸ್ಟೇಟರ್‌ರ ನೇತೃತ್ವದಲ್ಲಿ ಜಿಲ್ಲಾ ಪ್ರಾಣಿ ಮಾರುಕಟ್ಟೆ ಸಮಿತಿಗಳ ಒಪ್ಪಿಗೆ ಇಲ್ಲದೆ ಯಾವುದೇ ದನಗಳ ಸಂತೆ ನಡೆಯುವಂತಿಲ್ಲ. ಇಂತಹ ಸಮಿತಿಗಳಲ್ಲಿ ಸರ್ಕಾರ ಅನುಮೋದಿಸಿದ ಪ್ರಾಣಿ ಕಲ್ಯಾಣ ಸಂಘಗಳ ಇಬ್ಬರು ಪ್ರತಿನಿಧಿಗಳು ಇರುತ್ತಾರೆ.

ಭಾರತದ ಬಹುತೇಕ ರಾಜ್ಯಗಳಲ್ಲಿ ವಾರ ವಾರ ದನಗಳ ಸಂತೆಗಳು ನಡೆಯುತ್ತವೆ. ಉತ್ತರಪ್ರದೇಶ, ರಾಜಸ್ತಾನ, ಹರಿಯಾಣ, ಮಹಾರಾಷ್ಟ್ರ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಇಂತಹ ವ್ಯವಸ್ಥೆ ಜಾರಿಯಲ್ಲಿದೆ.

ಕೇಂದ್ರ ಸರ್ಕಾರ ಹೊರಡಿಸಿರುವ ನಿಯಮಾನಳಿಗಳನ್ನು ಮುಂದಿನ ಮೂರು ತಿಂಗಳಲ್ಲಿ ಜಾರಿಗೆ ತರಬೇಕಾಗಿದೆ. ಗೋ ವ್ಯಾಪಾರಸ್ಥರ ಪೈಕಿ ಬಹುತೇಕ ಮಂದಿ ಬಡವರು ಹಾಗೂ ಅನಕ್ಷರಸ್ಥರಾಗಿರುವುದರಿಂದ ಅವರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದ್ದು, ಇದಕ್ಕಾಗಿ ಕಾಲಾವಕಾಶ ನೀಡಲಾಗಿದೆ

No comments:

Post a Comment